ನಿಂಗ್ - ಪೋ
	ಚೀನದ ಜೆಜಿಯಾಂಗ್ ಪ್ರಾಂತ್ಯದ ಈಶಾನ್ಯ ಭಾಗದಲ್ಲಿ ಹ್ಯಾಂಗ್‍ಚೌ ಕೊಲ್ಲಿಯ ದಕ್ಷಿಣದಂಡೆಯ ಮೇಲೆ ಫಲವತ್ತಾದ ಸಮತಲ ಪ್ರದೇಶದಲ್ಲಿರುವ ನಗರ. ಇದೇ ಹೆಸರಿನ ವಿಭಾಗದ ಆಡಳಿತ ಕೇಂದ್ರ. ಇದು ಯಂಗ್ ಚಿಯಾಂಗ್ ನದೀಮುಖದಿಂದ ಮೇಲೆ ಸುಮಾರು 26 ಕಿಮೀ. ದೂರದಲ್ಲಿ ಉ.ಅ. 29( 52 ಮತ್ತು ಪೂ.ರೇ. 121( 31 ಮೇಲಿದೆ. ಜನಸಂಖ್ಯೆ 3,50,000 (1970). ಪೂರ್ವಕಾಲದಿಂದಲೂ ಇದು ಪ್ರಮುಖ ಬಂದರಾಗಿದೆ. ನಗರದ ಸುತ್ತ 8 ಕಿಮೀ. ಉದ್ದದ ಪ್ರಾಚೀನ ಕೋಟೆಯಿದೆ. ಇದಕ್ಕೆ 6 ದ್ವಾರಗಳಿವೆ. ಈ ನಗರದ ಪ್ರಮುಖ ಉತ್ಪನ್ನಗಳು ಬಟ್ಟೆ. ವಿದ್ಯುತ್ ಉಪಕರಣ, ಡಬ್ಬೀಕರಿಸಿದ ಆಹಾರಪದಾರ್ಥ, ಹತ್ತಿ, ಚಹ ಮತ್ತು ಡೀಸೆಲ್‍ಯಂತ್ರ. ಇಲ್ಲಿಯ ದಂತದ ಕೆತ್ತನೆ ಕೆಲಸ ಪ್ರಸಿದ್ಧವಾದ್ದು. ಇಲ್ಲಿಯ ಗ್ರಂಥಾಲಯ ಚೀನದ ಅತ್ಯಂತ ದೊಡ್ಡ ಗ್ರಂಥಾಲಯಗಳಲ್ಲೊಂದು.

	5ನೆಯ ಶತಮಾನದಲ್ಲಿ ಕೊರಿಯದ ಹಡಗುಗಳು ದಕ್ಷಿಣದ ರಾಜಧಾನಿಯಾದ ನ್ಯಾನ್‍ಕಿಂಗ್‍ನೊಡನೆ ಈ ಬಂದರಿನ ಮೂಲಕ ಸಂಪರ್ಕ ಬೆಳೆಸಲು ಪ್ರಾರಂಭಿಸಿದಾಗ ಇದರ ಪ್ರಾಮುಖ್ಯ ಬೆಳೆಯಿತು. ಟಾಂಗರ ಕಾಲದಲ್ಲಿ ಇದು ಉಚ್ಛ್ರಾಯ ಸ್ಥಿತಿಯಲ್ಲಿತ್ತು. 838ರ ಅನಂತರ ಇಲ್ಲಿ ಖಾಸಗಿ ವ್ಯಾಪಾರ ಬೆಳೆಯಿತು. 11ನೆಯ ಶತಮಾನದಲ್ಲಿ ಇದು ಸಮುದ್ರವ್ಯಾಪಾರದ ಪ್ರಮುಖ ಕೇಂದ್ರವಾಯಿತು. 1127ರಲ್ಲಿ ಹ್ಯಾಂಗ್‍ಚೌ ದಕ್ಷಿಣ ಸುಂಗರ ರಾಜಧಾನಿಯಾದ ಅನಂತರ ವಿದೇಶೀ ವ್ಯಾಪಾರ ಈ ನಗರದ ಮೂಲಕವೇ ನಡೆಯುತ್ತಿತ್ತು. ಇದು ಬಹಳ ಅಭಿವೃದ್ಧಿ ಹೊಂದಿತು. ಮಿಂಗರ ಕಾಲದಲ್ಲಿ (1368-1644) ಹೊರದೇಶಗಳೊಡನೆ ವ್ಯಾಪಾರವನ್ನು ಸರ್ಕಾರ ಕಡಿಮೆ ಮಾಡಿ ಕರಾವಳಿ ವ್ಯಾಪಾರವನ್ನು ತೀವ್ರವಾಗಿ ನಿರ್ಬಂಧಿಸಿದ್ದರಿಂದ ನಿಗಂ-ಪೋದ ಅಭಿವೃದ್ಧಿಗೆ ದಕ್ಕೆ ಒದಗಿತು. ಆದರೆ 1545ರಲ್ಲಿ ಪೊರ್ಚುಗೀಸರು ಈ ಬಂದರಿನಲ್ಲಿ ವ್ಯಾಪಾರ ಪ್ರಾರಂಭಿಸಿದಾಗ ಇಲ್ಲಿಯ ಆರ್ಥಿಕ ಸ್ಥಿತಿ ಮತ್ತೆ ಸುಧಾರಿಸಿತು. ಅನಂತರ ಡಚ್ ಹಾಗೂ ಬ್ರಿಟಿಷ್ ವ್ಯಾಪಾರಿಗಳೂ ಇಲ್ಲಿ ವ್ಯಾಪಾರ ಮಾಡಲಾರಂಭಿಸಿದರು. 19ನೆಯ ಶತಮಾನದಲ್ಲಿ ಈ ನಗರ ಅತ್ಯಂತ ಉಚ್ಛ್ರಾಯ  ಸ್ಥಿತಿಯಲ್ಲಿತ್ತು. ಬ್ರಿಟನ್ನಿನೊಂದಿಗೆ ಅಫೀಮಿನ ಯುದ್ಧ ಕೊನೆಗೊಂಡಾಗ 1642ರಲ್ಲಿ ಮಾಡಿಕೊಳ್ಳಲಾದ ನ್ಯಾನ್‍ಕಿಂಗ್ ಒಪ್ಪಂದದಂತೆ ವಿದೇಶೀ ವ್ಯಾಪಾರಕ್ಕೆ ಇದನ್ನು ಮತ್ತೆ ತೆರೆಯಲಾಯಿತು. ಸ್ವಲ್ಪ ಕಾಲದ ಅನಂತರ ಷಾಂಘೈ ಹೆಚ್ಚು ಪ್ರಾಮುಖ್ಯ ಗಳಿಸಿತು. ಇದರ ಪ್ರಾಮುಖ್ಯ ತಗ್ಗಿತು. ಈಗ ಇದು ಸ್ಥಳೀಯ ವ್ಯಾಪಾರ ಕೇಂದ್ರವಾಗಿ ಜೆಜಿಯಾಂಗಿನ ಈಶಾನ್ಯಭಾಗದ ಪ್ರಮುಖ ಬಂದರಾಗಿದೆ.
(ಜೆ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ